Wednesday, March 4, 2009

ಆಡಳಿತದ ಚುಕ್ಕಾಣಿ ಯಾರ ಕೈಯಲ್ಲಿ ?

ಲೋಕಸಭೆ ಚುನಾವಣೆಯಲ್ಲಿ ಮತಗಳನ್ನು ಸೆಳೆಯಲೆಂದು ನಾಯಕರು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ತಮ್ಮ ಸ್ವ ಕ್ಷೇತ್ರವಾದ ರಾಯಬರೇಲಿಯಲ್ಲಿ ದಲಿತ ಮನೆಯೊಂದರಲ್ಲಿ ವಾಸ್ತವ್ಯ ಮಾಡಿದ್ದರು, ಆದರೆ ವಾಸ್ತವ್ಯ ಮಾಡಿದ ತಕ್ಷಣ ದಲಿತರು ಉದ್ಧಾರಾದರೇ. ಆ ದಲಿತ ಮನೆ ಕೂಡಾ ಉದ್ಧಾರಾಗಿಲ್ಲ. ರಾಹುಲ್ ಗಾಂಧಿ ಕೂಡಾ ತಾಯಿಯ ಕಸರತ್ತನ್ನು ಮುಂದುವರೆಸಿದ್ದಾರೆ. ಈ ರೀತಿ ಜನರ ಕಣ್ಣಿಗೆ ಮಣ್ಣು ಏರಚಿ ವೋಟ್ ಬ್ಯಾಂಕ್ ಭದ್ರತೆ ಮಾಡಿಕೊಳ್ಳಲು ಮತದಾರರ ಜೊತೆ ಆಟವನ್ನು ಪ್ರಾರಂಭಿಸಿದ್ದಾರೆ.

ಇದುವರೆಗೂ ಕಾಂಗ್ರೇಸ್ ನಮ್ಮ ದೇಶವನ್ನು ಆರವತ್ತು ವರ್ಷಗಳ ಕಾಲ ಆಡಳಿತ ನಡೆಸಿದೆ. ಆ ಅವಧಿಯಲ್ಲಿ ದಲಿತರ ಉದ್ಧಾರ ಮಾಡಲು ಗೊತ್ತಾಗಲಿಲ್ಲವೆ?. ಈಗ ವಾಸ್ತವ್ಯದ ನೆಪ ಹೇಳಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಇದೀಗ ಬರುವ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಈ ತರಹದ ನಾಟಕವನ್ನು ನಡೆಸಿದ್ದಾರೆ.

ಮಾಜಿ ಪ್ರಧಾನಿ ಎಲ್.ಕೆ ಅಡ್ವಾಣಿಯವರು ಈಗಾಗಲೇ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಗುರುತಿಸಿದೆ, ಆದರೆ ಆಂತರಿಕ ಕಲಹ ಮುಗಿಲು ಮುಟ್ಟುತ್ತಿದೆ. ಅಧಿಕಾರದ ಚುಕ್ಕಾಣೆಯನ್ನು ಹಿಡಿಯಲು ಏನೆಲ್ಲಾ ಕಸರತ್ತು ನಡೆಸುತ್ತಿದೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇಯವರ ಆಡಳಿತದಲ್ಲಿ ಅವ್ಯವಹಾರ ನಡೆದಿದೆ ಎಂದು ಪಕ್ಷದ ಮುಖಂಡ ಮಾಜಿ ಮಂತ್ರಿ ಕಲ್ಯಾಣಸಿಂಗ್ ಆರೋಪಿಸಿದ್ದಾರೆ, ಆದರೆ ಇವರು ಸದ್ಯ ಸಮಾಜವಾದಿ ಪಕ್ಷದಲ್ಲಿ ಇದ್ದಾರೆ. ಇದು ನುಂಗಲಾರದ ತುತ್ತಾಗಿದೆ.

ಪ್ರಧಾನಿ ಕನಸನ್ನು ಹೊತ್ತು ದೇಶದ ತುಂಬೆಲ್ಲಾ ಅಲೆದಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ಜೊತೆ ಕೂಡಾ ಮೈತ್ರಿಯ ಕಸರತ್ತನ್ನು ಮುಂದುವರೆಸಿದ್ದಾರೆ, ಆದರೆ ಅವರಿಗೆ ಬೆಂಬಲ ನೀಡಲು ಯಾರು ಮುಂದೆಬರುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಆಂಧ್ರ ಪ್ರದೇಶದಲ್ಲಿ ಕಳೆದ ಬಾರಿ ಟಿಡಿಪಿ ಪಕ್ಷದೊಂದಿಗೆ ಹಾಗು ತಮಿಳುನಾಡಿನಲ್ಲಿ ಎಐಡಿಎಂಕೆ ಜೊತೆ ಮೈತ್ರಿ ಇತ್ತು. ಇವರು ಸದ್ಯ ತೃತೀಯ ರಂಗದ ಜೊತೆ ಗುರುತಿಸಿಕೊಂಡಿದ್ದಾರೆ.

ತಮಿಳುನಾಡು, ಆಂಧ್ರ ಪ್ರದೇಶ, ಮಧ್ಯ ಪ್ರದೇಶ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಈ ಬಾರಿ ಕೈ ಕೊಡುತ್ತಿವೆ. ಹೀಗಾಗಿ ಏಕಾಂಗಿ ಸ್ಫರ್ಧೆ ಅನಿವಾರ್ಯವಾಗಿದೆ. ಇಂತಹ ಪರಿಸ್ಥಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದೇ? ಎನ್ನುವ ಪ್ರಶ್ನೆ ಇದೆ. ಯುಪಿಎ ಸರ್ಕಾರದ ವಿರುದ್ಧ ಚುನಾವಣೆ ಸಮಯದಲ್ಲಿ ಭಯೋತ್ಪಾದನೆ, ಆರ್ಥಿಕ ಮುಗ್ಗಟ್ಟು, ಅಣು ಒಪ್ಪಂದ, ಅಫ್ಜಲ್ ಗುರು ಮರಣ ದಂಡನೆ ವಿಷಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇನ್ನು ಮಾಯಾವತಿಯವರ ವಿಚಾರಕ್ಕೆ ಬಂದರೆ ನಾನೇ ಪ್ರಧಾನಿ ಎಂಬಂತೆ ಬಿಂಬಿಸುತ್ತಿದ್ದಾರೆ. ಈಗಾಗಲೇ ಸ್ವ ರಾಜ್ಯದಲ್ಲಿ ಈಗಾಗಲೇ ಎಂಜಿನಿಯರ್, ಐಎಎಸ್, ಕೆಎಎಸ್, ಅಧಿಕಾರಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ಕೂಡ ಅಲ್ಲಗಳೆಯುವಂತಿಲ್ಲ. ಜನ್ಮ ದಿನಾಚರಣೆಗೆ ಅಭಿಮಾನಿಗಳ ಸಂಗ್ರಹ ಹಣವೆಂದು ಈಗಾಗಲೇ ಕೋಟಿ-ಕೋಟಿ ಸಂಗ್ರಹಿಸಿಕೊಂಡಿದ್ದಿದ್ದಾರೆ.

ದಲಿತರ, ಮೇಲ್ವರ್ಗದ ಉದ್ದಾರ ನನ್ನ ಕೈಯಲ್ಲಿ ಇದೆ. ನಾನು ಮಾತ್ರ ಈ ದೇಶದ ಉದ್ದಾರವನ್ನು ಮಾಡಬಲ್ಲೆ ಏಂದು ಸಾರಿ ಸಾರಿ... ಹೇಳಿಕೋಳ್ಳುತ್ತಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಪ್ರತಿಮೆಯನ್ನು ಸ್ಥಾಪನೆ ಮಾಡಿಕೊಂಡಿರುವ ಅವರು, ಆಕಸ್ಮಾತ್ ಜನ ಅವಳನ್ನು ಪ್ರಧಾನಿ ಗದ್ದುಗೆಗೆ ಕಳುಹಿಸಿಕೊಟ್ಟರೆ ಈಡಿ ದೇಶದ ತುಂಬೆಲ್ಲಾ ಪ್ರತಿಮೆಯನ್ನು ಸ್ಥಾಪಿಸುವಳು. ಜನರು ಬಯಸುವುದು ನಿಮ್ಮಂದ ಅಭಿವೃದ್ಧಿ ಮಾತ್ರ ನಿಮ್ಮ ಪ್ರತಿಮೆಗಳಲ್ಲ ಮಾಯಾಜೀಯವರೆ.

ಇಷ್ಟೆಲ್ಲಾ ಒಂದಡೆಯಾದರೆ ಈ ಕಮ್ಯನಿಷ್ಠರ ಆಟ ಮತ್ತೊಂದಾಗಿದೆ. ತೃತಿಯ ರಂಗ ರಚಿಸಿಸಿಕೊಂಡು ನಾವೇ ಈ ದೇಶವನ್ನು ಆಳುತ್ತೇವೆ ಎಂಬ ನಂಬಿಕೆಯನ್ನು ಇಟ್ಟು ಕೊಂಡಿದ್ದಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ರೈತರ ಮೇಲೆ, ಅಮಾಯಕ ಜನರ ಮೇಲೆ ನಡೆಸಿದ್ದಾದರು ಏನು? ಕೊಲೆ, ಸುಲಿಗೆ, ಮಾನಭಂಗ, ಚಿತ್ತಹಿಂಸೆ, ಘಟನೆ ಜರುಗಿದಾಗ ನೀವು ಕೈಗೊಂಡ ನಿಲುವಿನ ಬಗ್ಗೆ ದೇಶದ ಜನತೆ ಕಂಡಿದೆ. ಇದಕ್ಕೆ ಸದ್ಯದಲ್ಲೆ ನಿಮಗೆ ಜನರು ಉತ್ತರ ನೀಡಲಿದ್ದಾರೆ.

ಹೀಗೆ ಪ್ರತಿಯೊಂದು ಪಕ್ಷದ ಬಗ್ಗೆ ಹೇಳುತ್ತಾ ಹೋದರೆ ನಮ್ಮನ್ನು ಯಾರು ಆಳಬೇಕು ಎಂಬ ಪ್ರಶ್ನೆ ನನ್ನನ್ನು ಈಗಲೂ ಕಾಡುತ್ತಿದೆ. ಆದರೆ ಪವಿತ್ರವಾದ ಮತವನ್ನು ನಾನು ಹಾಕಲೇ ಬೇಕು. ನಡು ನೀರುನಲ್ಲಿ ಇರುವ ನಾವು ದಡ ಸೇರಿಸುವವರಿಗೆ ನಿಮ್ಮ ಮತವಿರಲಿ..............